Saturday, January 17, 2009

ನಾನು ಏನೂ ಹೇಳಲಾರೆ..

ಬರೆಯಲು ಪುಟ ತೆರೆದು ಬ್ಲ್ಯಾಂಕ್ ಇಟ್ಟು ಯೋಚಿಸಿದ್ದು ಹೆಚ್ಚು ಕಡಿಮೆ ಒಂದು ಗಂಟೆ. ಮುಂಬೈ ದಾಳಿ: ಪ್ರಭುತ್ವಕ್ಕೆ ಕೊನೆಯ ಎಚ್ಚರಿಕೆ ಲೇಖನಕ್ಕೊಂದು ಪ್ರತಿಕ್ರಿಯಿಸಬೇಕು, ಆದರೆ ಹೇಗೆ? ಪ್ರತಿಕ್ರಿಯಿಸದ್ದಿದರೆ ದೊಡ್ಡ ಹಡಗೇನು ಮುಳುಗುವುದಿಲ್ಲ. ಇಂಥ ಸಾವಿರಾರು ವಿಷಯಗಳಿಗೆ ತುಟಿ ಬಿಚ್ಚದ ದೊಡ್ಡ ಸಮುದಾಯವೇ ಇದೆ. ಮಾತಾಡುವವರು 'ನಾವು' ಬೆರಳೆಣಿಕೆಯಷ್ಟು. ಆದರೂ ಎಲ್ಲ ತೀರ್ಮಾನಗಳು ನಮ್ಮ ಮೂಗಿನ ನೇರಕ್ಕಿದ್ದರೆ ಸಮಾಧಾನ ಇಲ್ಲವಾದರೆ ಅದು ಅಸತ್ಯ. ಹಾಗಾದರೆ ನನ್ನದು ಸತ್ಯಶೋಧನೆಯೇ? ಅಯ್ಯೋ ಹಾಗಿನಿಲ್ಲ. ಸತ್ಯ ಒಂದಿದ್ದರೆ ತಾನೇ, ಯಾಕೆಂದರೆ ಸತ್ಯಗಳು ಅನೇಕ ಎಂದು ಮೊನ್ನೆ ಸೆಮಿನಾರಿನಲ್ಲಿ ಕೇಳಿದ್ದೇನೆ. ನನ್ನದೇ ಸತ್ಯ ಎಂದು ವಾದಿಸೋಣವೆಂದರೆ ದಕ್ಕಿಸಿಕೊಳ್ಳೋ ತಾಕತ್ತಿಲ್ಲ.
ಅದಕ್ಕಿಂತ ಮೊದಲು ವಿಷಯದ ಆಳ ಅಗಲದ ಅರಿವಿಲ್ಲ. ಯಾವುದೋ ವಿಷಯವನ್ನು ಇನ್ಯಾವುದೋ ಸಂಗತಿಗೆ ಜೋಡಿಸಿ ಮಾತಾಡಬಲ್ಲ ಜಾಣ್ಮೆಯೂ ಇಲ್ಲ. ಬೇರೆ ಸಂಪದಿಗರಾದರೋ ಆಗಬಹುದು ಆದರೆ ನಾನು ಹೇಳಿಕೇಳಿ ಸಾಹಿತ್ಯದ ವಿದ್ಯಾರ್ಥಿ. ನನಗೊಂದು ಹೀಗೆ ಮಾತಾಡಬೇಕೆಂಬ 'ಶಿಸ್ತಿದೆ'(?). ಈ 'ಇಸಂ' ಹಿಡಿದು ಮಾತಾಡೋಣವೆಂದರೆ ನಮ್ಮ ದೇಶಕ್ಕೆ ನೂರಾರು ನೇತಾರರು ಸಾವಿರಾರು ವಾದಗಳು. ಒಬ್ಬರ ಬಗ್ಗೆ ಒಬ್ಬರಿಗೆ ನಂಬಿಕೆಯು ಆದರಣೆಯೂ ಇಲ್ಲ. ಪ್ರಗತಿಪರ ಧೋರಣೆಗಳನ್ನು ಇರಬೇಕು ನನ್ನ ವಿಚಾರದಲ್ಲಿ ಎಂದುಕೊಳ್ಳುತ್ತೇನೆ, ಹಾಗಂದರೇನು ಎಂಬ ಬಗ್ಗೆ ಯಾರ ವ್ಯಾಖ್ಯಾನಗಳನ್ನು ನಂಬಬೇಕೆಂಬ ತಕರಾರು.
ಛೇ, ಇಷ್ಟು ವರ್ಷ ಓದಿದ 'ವಸ್ತುನಿಷ್ಠ' ವಿಚಾರವಿದೆಯಲ್ಲ, ಬೆಣ್ಣೆ ಕೈಯಲ್ಲಿ ಹಿಡಿದು ತುಪ್ಪಕ್ಕೆ ಹುಡುಕಿದೆನಲ್ಲ. ನೇರ ಸುದ್ದಿಗಳನ್ನು ತೆಗೆದು ಅದರಿಂದ ನನ್ನ ವಿಚಾರಗಳನ್ನು ಪೋಣಿಸಿಕೊಳ್ಳಬೇಕೆಂದುಕೊಳ್ಳುತ್ತೇನೆ, ಆದರೆ ಆ ಪತ್ರಿಕೆಗಳಲ್ಲೂ ಕೆಂಪು ಕೇಸರಿ ಹಸಿರು ಎಂಬ ಎಲ್ಲ ಬಣ್ಣಗಳು ಇವೆಯಂತೆ. ಹಾಗಾದರೆ ನೂರು ರೀತಿಯ ನೂರು ಆಕೃತಿಯ ವ್ಯಾಖ್ಯಾನಗಳು ಇವೆಯಲ್ಲ ಯಾವುದನ್ನು ನಂಬಲಿ ನಿಜವೆಂದು? ನಾನು ಎಂಬ ಅಹಂ ಸರಿಯದೇ ಸತ್ಯದ ಅರಿವಾಗದು ಅದ್ದರಿಂದ ನನ್ನ ಅಹಂ ನಿರಸನವಾಗದೇ ಸತ್ಯ ಗೋಚರಿಸದು ಎಂದರೆ ನನಗೆ ಒಂದು ಅನನ್ಯತೆಯೇ ಇರದೇ ನಾನು ಹೇಗೆ ಪ್ರತಿಕ್ರಿಯಿಸುವುದು?
ಆದರೂ ನನಗೆ ಏತ ಎಂದರೆ ಪ್ರೇತ ಎಂದೇ ರೂಢಿ. ಅದೇ ನನಗೆ 'ವಿಚಾರ ಮಾಡುವ ಹುಡುಗ ಎಂಬ ಬಿರುದು ಕೊಡಿಸಿದೆ. ಈಗ ಎನೋ ಹೊಳೆಯುತ್ತಿದೆ. ಸತ್ಯವೆಂಬುದು ಆಡವವನ ಜಾಣತನದ ಮೇಲೆ ಅವಲಂಬಿಸಿರುತ್ತದೆ. ಬಾಯಿ ದೊಡ್ಡದಿರಬೇಕು ಅಷ್ಟೆ. ಬೊಬ್ಬೆ ಹಾಕಿ ಎದುರಿನವರನ್ನು ಗೆದ್ದರಾಯಿತು, ಮತ್ತೆ ಗೆದ್ದವರದ್ದೇ ಸತ್ಯ ಅಲ್ಲವೇ? ಇಲ್ಲಿ ತನಕ ಗೆದ್ದವರು ಮಾಡಿದ್ದು ಇದೇ ಅಲ್ಲವೇ?
ಯಾಕೋ ದೌರ್ಜನ್ಯದಿಂದ ಸತ್ಯ ಸಾಧಿಸಲು ನನ್ನ ಮನಸು ಒಪ್ಪುತ್ತಿಲ್ಲ. ಹಾಗಾಗಿ ಏನೂ ಪ್ರತಿಕ್ರಿಯೆ ನೀಡಲು ಇಷ್ಟವಿಲ್ಲ ಬೇಡ ಬಿಡಿ. ನನಗೂ ಹುಚ್ಚು, ನನ್ನ ಪ್ರತಿಕ್ರಿಯೆ ಇಲ್ಲದಿದ್ದರೆ ಲೋಕ ಮುಳುಗುವುದಿಲ್ಲ.

No comments:

Post a Comment