Saturday, January 17, 2009

'ಹೆಣ್ಣಾಗುವ' ಒಂದು ಪ್ರಸಂಗ

ನನ್ನ ಮೊಬೈಲ್ ಗೊಂದು ಮಿಸ್ಡ್ ಕಾಲ್. ಇದು ಯಾರು ಎಂದು ಕೇಳಿ ರಿಪ್ಲೇ ಮಾಡಿದೆ. ತಕ್ಷಣವೇ ಅಲ್ಲಿಂದ ಶುರುವಾಯ್ತು ಮೆಸೇಜುಗಳ ಸುರಿಮಳೆ. ನಮ್ಮ ನಡುವಿನ ಸಂಭಾಷಣೆಯನ್ನು ಹಾಗೆಯೇ ನೀಡಿದರೆ ಚೆನ್ನ.'ನೀವು ರಚನ್ ಅಲ್ವಾ? ''ಅಲ್ಲ, ನಾನು ರಚನ್ ಅಲ್ಲ''ನಿಮ್ಮ ಹೆಸರು ಕೇಳಬಹುದೇ?''ಕ್ಷಮಿಸಿ, ಗುರುತಿಲ್ಲದವರಿಗೆ ಪರಿಚಯ ಹೇಳಲಾರೆ''ಪರಿಚಯಕ್ಕೇನು, ಮಾಡಿಕೊಂಡರಾಯಿತು. ನಾನು ಮನು. ೩ನೇ ಸೆಮ್ ಇ ಅಂಡ್ ಸಿ. ಊರು ಬೆಂಗಳೂರು, ನೀವು?'
ನಾನು ಈಗ ನಿಜಕ್ಕೂ ಸಂಕಟಕ್ಕೆ ಸಿಲುಕಿದೆ. ಹೀಗೆಯೆ ಎಷ್ಟೊ ಜನ ಮಿಸ್ ಕಾಲ್ ಗಳಿಂದ ಪರಿಚಿತರಾಗಿ ಗೆಳೆಯರಾಗಿರುವುದನ್ನು ಕೇಳಿದ್ದೆ. ಆದರೂ ನನ್ನ ನಿಜ ಪರಿಚಯ ಕೊಡಲು ಹಿಂಜರಿಕೆಯಾಯಿತು. ಇದು ಆತನಿಗೆ ಅರ್ಥವಾಯಿತೋ ಎಂಬಂತೆ ಆತನೇ ಮಾತು ಮುಂದುವರಿಸಿದ. 'ಪರವಾಗಿಲ್ಲ, ನೀವು ಹುಡುಗನೋ, ಇಲ್ಲ ಹುಡುಗಿಯೋ' ಎಂದು ಕೇಳಿದ.
ನನಗೆ ಈ ಪ್ರಶ್ನೆ ಕುತೂಹಲ ಹುಟ್ಟಿಸಿತು. ನಾನು ಹುಡುಗಿಯೆಂದರೆ ಇವನ ಪ್ರತಿಕ್ರಿಯೆ ಹೇಗಿರಬಹುದು ಅಂತ. ಆದರೂ ಹುಡುಗಿ ಎಂದು ಹೇಳಿ ಕೊಳ್ಳಲು ತುಸು ಹಿಂಜರಿಕೆಯಾಯಿತು. ಆದರೂ ನನಗೂ ಯಾಕೋ ಸ್ವಲ್ಪ ಇವನನ್ನು ಆಡಿಸಬೇಕು ಎಂದು ಅನ್ನಿಸಿತು. ನಾನು ನನ್ನ ಹೆಸರು ಹೇಳುವಾಗ ವಸಂತ ಎಂಬ ಲಿಂಗಭೇದ ತಿಳಿಯದ ಹೆಸರನ್ನು ಹೇಳಿದೆ. 'ಸರಿ ನಾನು ಈಗ ಕಾಲ್ ಮಾಡಲಾ ಫ಼್ರೆಂಡ್' ಎಂದ. ನಾನು ಮನೆಯಲ್ಲಿರುವುದಾಗಿಯೂ ನಾನು ಈಗ ಕಾಲ್ ಅಟೆಂಡ್ ಮಾಡಲು ಸಾಧ್ಯವಿಲ್ಲ, ಅಪ್ಪ ಅಮ್ಮ ಬೈತಾರೆ ಎಂದೆ. ಅಲ್ಲಿಗೆ ಅವನಿಗೆ ಸ್ಪಷ್ಟವಾಯಿತು, ಈ ವ್ಯಕ್ತಿ ಹುಡುಗಿಯೇ ಇರಬೇಕು ಎಂದು. ' ಪರವಾಗಿಲ್ಲ ವಸಂತ, ನೀವು ಮೆಸೆಜ್ ಮಾಡಿ ಸಾಕು' ಎಂಬ ಸಾಂತ್ವಾನ ಬೇರೆ. ಹೀಗೆ ಊರು ತರಗತಿ ಪಠ್ಯ ಎಲ್ಲವೂ ಖೊಟ್ಟಿ ಕೊಟ್ಟದಾಯಿತು. ಅನುಮಾನ ಬಾರದಿರಲೆಂದು ಒಮ್ಮೆ ನನ್ನ ಗೆಳೆತಿಯಿಂದ ಕಾಲ್ ಅಟೆಂಡ್ ಕೂಡ ಮಾಡಿಸಿ ಆಯಿತು. ಅಲ್ಲಿಗೆ ೧೦೦ ಶೇಕಡಾ ಹುಡುಗಿಯೇ ಅಂತ ಅಂದುಕೊಡ. ದಿನವೂ ಹೀಗೆ ಗುಡ್ ಮಾರ್ನಿಂಗ್, ಗುಡ್ ನೈಟ್, ಒಳ್ಳೊಳ್ಳೆ ಶಾಯರಿಗಳು ಬರತೊಡಗಿದವು. ಒಮ್ಮೊಮ್ಮೆ ಇಷ್ಟು ಒಳ್ಳೆ ಹುಡುಗನಿಗೆ ಸುಳ್ಳು ಹೇಳಿದೆನಲ್ಲ ಅನ್ನಿಸಿದುಂಟು.
ಹೀಗೆ ಸ್ವಲ್ಪದಿನ ಕಳೆದಿರಬೇಕು. ಒಂದು ದಿನ ರಾತ್ರಿ ಮೆಸೆಜ್ ಅಲ್ಲೇ (ಚಾಟಿಂಗ್) ಮಾತಾಡುವಾಗ ನನ್ನ ಹವ್ಯಾಸಗಳ ಕುರಿತು ಕೇಳಿದ.'ನಿಮಗೆ ಯಾವ ಬಣ್ಣದ ಡ್ರೆಸ್ ಗಳು ಇಷ್ಟ''ನನಗೆ ನೀಲಿ ಬಣ್ಣದ ಡ್ರೆಸ್ ಗಳು''ನೀವು ಜೀನ್ಸ್ ಹಾಕ್ತೀರಾ''ಇಲ್ಲ, ನನಗೆ ಇಷ್ಟ ಇಲ್ಲ, ಆದರೆ ಬೇರೆಯವರು ಹಾಕೊ ಬಗ್ಗೆ ನನಗೇನು ತಕರಾರಿಲ್ಲ''ಓ ಹಾಗಾದರೆ ನೀವು ತುಂಬಾ ಸಂಪ್ರದಾಯವಾದಿಗಳು ಅಂತ ಅಯ್ತು''ಹಾಗೇನು ಇಲ್ಲ, ಅದ್ರೆ ನನಗೆ ಇಷ್ಟ ಇಲ್ಲ ಅಷ್ಟೆ''ಓಹೋ, ಹಾಗೆ. ಏನ್ರೀ ಈಗಿನ ಹೈಸ್ಕೂಲ್ ಹುಡುಗಿರಷ್ಟು ಪ್ರಯೋಜನ ಇಲ್ಲ ನೀವು, ಯಾವ ರೀತಿ ಬಟ್ಟೆ ಹಾಕ್ತಿರ್‍ಇ ನೀವು ಐ ಮೀನ್ ವಾಟ್ ಟೈಪ್ ಆಫ್ ಡ್ರೆಸ್ ಯು ವಾಂಟ್ ಟು ವಿಯರ್?'ನಿಜಕ್ಕೂ ನನಗೆ ಏನು ಹೇಳಬೇಕು ಎಂದು ತಿಳಿಯಲ್ಲಿಲ್ಲ. ಆದರೂ ತೀರ ಸಂಕೋಚದಿಂದ ಚೂಡಿದಾರ್ ಎಂದೆ. ಆಗ ನಾನು ಊಹಿಸದೇ ಇರುವ ಪ್ರಶ್ನೆ ಬಂತು. 'ಹಾಗಾದರೆ ಅವನು ಅದರ ಅಳತೆ ಎಷ್ಟು' ಎಂದ. ಒಮ್ಮೆಗೆ ದಿಗಿಲು ಕವಿದಂತಾಯಿತು. ಅಯ್ಯೋ ಯಾಕಾದ್ರೂ ಇವನ ಜೊತೆ ಚಾಟ್ ಮಾಡಲು ಶುರು ಮಾಡಿದಿದೆನೋ ಎಂಬ ಮುಜುಗರ ಕಾಡತೊಡಗಿತು. ದೇವರಾಣೆಗೂ ನನಗೆ ಏನು ಉತ್ತರ ಹೇಳಬೇಕು ಎಂದು ಹೊಳೆಯಲ್ಲಿಲ್ಲ. ಕಡೆಗೆ ಏನೋ ಒಂದು ಉತ್ತರ ಕೊಟ್ಟೆ. ಅಲ್ಲಿಗೆ ಗುಡ್ ನೈಟ್ ಹೇಳಿ ಸಂಭಾಷಣೆಗೆ ಮುಕ್ತಾಯ ಹೇಳಿದೆ.
ಆದರೆ ಅದು ಆ ಹೊತ್ತಿಗೆ ಮುಗಿಯಲ್ಲಿಲ್ಲ. ಪ್ರತಿ ರಾತ್ರಿ ಅಂತಹದ್ದೇ ಪ್ರಶ್ನೆಗಳು. ಆದರೆ ಅಸಹ್ಯ ಹುಟ್ಟಿಸಿದ್ದು, ಆತ ಮೊದಲಿನ ಪ್ರಶ್ನೆಗಳನ್ನು ಬಳಸಿ ದೈಹಿಕ ಮಟ್ಟದ ಪ್ರಶ್ನೆಗಳನ್ನು ಕೇಳಲು ಆರಂಭಿಸಿದಾಗ. ಆರಂಭದಲ್ಲಿ ಸಭ್ಯರನ್ನು ಮೀರಿಸುವ ಹಾಗೆ ವರ್ತಿಸುತ್ತಿದ್ದವ ಸ್ವಲ್ಪ ಸಲುಗೆ ಬೆಳೆದಾಗ ಮಾತಾಡುವ ಪರಿಯೇ ಬೇರೆಯಾಗಿತ್ತು. (ಸಭ್ಯತೆಯ ಕಾರಣಕ್ಕೆ ಕೆಲ ಸಂಭಾಷಣೆಗಳನ್ನು ಮಾತ್ರ ನೀಡಿದ್ದೇನೆ) ಕಡೆಗೆ ಈ ಚಾಟಿಂಗ್ ನಿಂದ ಬಿಡುಗಡೆ ಪಡೆಯಲು ಹರಸಾಹಸ ಮಾಡಬೇಕಾಯಿತು.
ಇಂತಹವರು ಸುಮ್ಮನೆ ಯಾವುದೋ ನಂಬರ್ ಒತ್ತಿ ಹುಡುಗನಾದರೆ ಸ್ಸಾರಿ ಹೇಳಿ, ಹುಡುಗಿಯಾದರೆ ಗಂಟೆಗಟ್ಟಲೇ ಮಾತಾಡುತ್ತಾರೆ. ಇವರ ಮಾತುಗಳು ಆರಂಭಕ್ಕೆ ಎಷ್ಟು ನಯ ಎನು ವಿನಯ ಏನು ಕತೆ, ವಚನಕಾರರ ಮಾತಲ್ಲಿ ಹೇಳುವುದಾದರೆ 'ಲಿಂಗವೇ ಮೆಚ್ಚಿ ಅಹುದಹುದೆನ ಬೇಕು..' ಎಷ್ಟೋ ವೇಳೆ ಚಿಕ್ಕ ಪ್ರಾಯದ ಹೆಣ್ಣು ಮಕ್ಕಳು ಇಂಥವರ ಸಮ್ಮೋಹಿನಿಗೆ ಒಳಗಾಗುವುದುಂಟು. ಹೆಣ್ಣು ಮಕ್ಕಳೊಂದಿಗೆ ಅಸಹ್ಯವಾಗಿ ಮಾತಾಡುವುದೇ ಇವರ ವಿಕೃತಿ. ಇದರಲ್ಲಿ ಒಳ್ಳೆ ಕಲಿತವರು ಇರುತ್ತಾರೆ ಎಂಬುದು ಬೇಸರದ ಸಂಗತಿ. ಕೇವಲ ಒಮ್ಮೆಯೇ ಇಂಥ ಪ್ರಸಂಗವನ್ನು ಎದುರಿಸಲು ಇಷ್ಟು ಕಷ್ಟಕರವಾಗಿತ್ತು, ಇನ್ನು ಯಾವಾಗಲೂ ಇಂಥಹದ್ದೇ ಕಿಡಿಗೇಡಿಗಳ ಉಪಟಳವನ್ನು ನಿಭಾವಣೆ ಎಷ್ಟು ಕಷ್ಟದ್ದು. ಅದು ಏನೇ ಇರಲಿ ಇಂತಹ ವ್ಯಕ್ತಿಗಳಿಂದ ಒಂದಂತೂ ನಿಜ.
ನಿಜವಾಗಿಯೂ ಹೆಣ್ಣು ಮಕ್ಕಳ ಕಷ್ಟ ದೊಡ್ಡದು.. ಒಮ್ಮೆಗೇ ಅದರ ಪರಿಚಯವಾಯಿತು.

No comments:

Post a Comment